WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » ಒಂದು ಆರ್ಡಿನರಿ ಲವ್‌ಸ್ಟೋರಿ

– ಬೇಳೂರು ಸುದರ್ಶನ




ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ …..
ಬೆಳಗಿನಿಂದ ಲಾಡ್ಜಿನಲ್ಲಿ ನಡೆದ ಎಲ್ಲ ಮಾತುಕತೆಯಲ್ಲೂ ಅವಳ ಅಳುವೇ ಮುಖ್ಯವಾಗಿ ಕೇಳಿಸುತ್ತಿತ್ತು ಎಂದು ನನ್ನ ಮಿತ್ರನೆಂಬೋ ಮನುಷ್ಯ ಹೇಳಿದ್ದ. ಇಲ್ಲಿ ಅವಳ ಕಣ್ಣುಗಳನ್ನು ನೋಡಿದ ಮೇಲೆ ಅವನ ಮಾತುಗಳನ್ನು ನಾನು ನಿಜವೆಂದೇ ತಿಳಿಬೇಕಿದೆ. ಮದುವೆಯಾಗಲು ಆತ ಒಪ್ಪಲಿಲ್ಲ ಎಂದು ಅವಳು ಮಾತೇ ಆಡದೆ ಸುಮ್ಮನೆ ಅಳುತ್ತ ಕೂತಿದ್ದಳಂತೆ. ಇಲ್ಲಿ ನೋಡಿದರೆ ನನ್ನ ಜತೆ ಬೆಂಗಳೂರಿಗೆ ಹೊರಟಿದ್ದಾಳೆ. ಅವಳನ್ನು ನನ್ನ ಜೊತೆ ಕಳಿಸುತ್ತಿರೋ ವ್ಯಕ್ತಿಗಳಿಗೆ ನನ್ನ ವಿಷಮನಸ್ಸು ಗೊತ್ತಿಲ್ಲ.
ಅವಳೀಗ ಅಲ್ಲಿಯೇ ಶಾಲು ಹಾಸಿ ಮಲಗಿದ್ದಾಳೆ. ಮೂರು ಸೀಟು ಹಾಗೂ ಇಂಜಿನ್ನಿನ ನಡುವೆ ನಾವು ಆರೇಳು ಗಂಟೆಗಳನ್ನು ಕಳೆಯಬೇಕು. ಅವಳು ಎಲ್ಲೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಅವಳನ್ನು ನಾನು ಮುಟ್ಟಬಹುದೆ ಎಂದು ಯಾರನ್ನೂ ಕೇಳಲಾಗಲಿಲ್ಲ. ಹೊರಗೆ ಕಂಡಕ್ಟರ್ ಸೀಟಿ ಊದಿದ್ದಾನೆ. ಮತ್ತೆ ಜನ ಎಲ್ಲಿಂದಲೋ ಬಂದು ತುಂಬಿಕೊಂಡಿದ್ದಾರೆ. ನಮ್ಮ ಸುತ್ತಲೂ ಗೋಣಿಚೀಲಗಳಿವೆ; ಬಾಕ್ಸುಗಳಿವೆ. ಹೂವುಗಳಿವೆ; ಹಣ್ಣುಗಳ ಬುಟ್ಟಿಗಳಿವೆ.
ನಾವು ಯಾವತ್ತೂ ಹೀಗೆ ಒಟ್ಟಿಗೆ ಕುಳಿತವರೂ ಅಲ್ಲ. ಈಗ ಮಾತ್ರ ಒಟ್ಟಿಗೆ ಮಲಗಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ನಾವು ಚಳ್ಳಕೆರೆಯಲ್ಲಿ ಚಾ ಕುಡಿಯಲು ಇಳಿಯುವುದಿಲ್ಲ. ಅಥವಾ ಚುಮುಚುಮು ನಸುಕಿನಲ್ಲಿ ತುಮಕೂರಿನಲ್ಲೂ ಇಳಿಯುವುದಿಲ್ಲ. ನಮಗೆ ಸೀದಾ ಬೆಂಗಳೂರಿಗೆ ಹೋಗಬೇಕು. ಅವಳನ್ನು ನಾನು ಹಾಸ್ಟೆಲಿಗೆ ಸೇರಿಸಬೇಕು. ಅವಳನ್ನು ವಾರಕ್ಕೊಮ್ಮೆ ನೋಡಿಕೊಳ್ಳಬೇಕು. ಅವಳು ಡಿಪ್ರೆಸ್ ಆಗಬಾರದು ಎಂದು ಡಾಕ್ಟರ್ ಹೇಳಿದ್ದಾರೆ.
ಸುಟ್ಟುಹೋದ ಅವಳ ಪ್ರೀತಿಯನ್ನು ಮತ್ತೆ ಅರಳಿಸಲು ಯಾರಾದರೂ ಬರಬಹುದು ಎಂದು ಕಾಯಬೇಕು.
ಬಳ್ಳಾರಿಯನ್ನು ದಾಟಿದ ಮೇಲೆ ಬಸ್ಸು ರೈಲಿ ಹಳಿಗುಂಟ ಹೋಗುತ್ತದೆ. ಬದುಕೇ ಹೀಗೆ ಒಂದು ಉದ್ದನೆಯ ಸರಳರೇಖೆ ಎಂದು ನಾವೆಲ್ಲ ಭಾವಿಸುವಂತೆ ಮಾಡುತ್ತದೆ. ಆಮೇಲೆ ಒಂಟಿ ಹೆದ್ದಾರಿಯಲ್ಲಿ ಚಳ್ಳಕೆರೆ, ಹಿರಿಯೂರು. ಆಮೇಲೆ ಜೋಡಿ ಹೆದ್ದಾರಿಯಲ್ಲಿ ಬೆಂಗಳೂರು. ಯಾವುದಿದ್ದರೂ ಇವಳ ಕಥೆ ಹೀಗಾಯಿತಲ್ಲ ಎಂದು ನನಗೆ ತೀರ ಬೇಸರವಾಗಿ ಎದ್ದು ಕೂತೆ. ಎಲ್ಲರೂ ಕಿಟಕಿಯನ್ನು ತೆರೆದು ಗಾಳಿಗೆ ಮುಖವೊಡ್ಡಿ ಮಲಗುವ ಹತಾಶ ಯತ್ನದಲ್ಲಿದ್ದರು. ಇವಳು ಇಲ್ಲಿ ವೇಲ್‌ನ್ನೇ ಹೊದ್ದು ಮಲಗಿದ್ದಾಳೆ. ಒಮ್ಮೊಮ್ಮೆ ಎದ್ದು ಕೂರುತ್ತಾಳೆ. ಬಿಕ್ಕುತ್ತಾಳೆ. ನಾನು ಅವಳ ಭುಜ ತಟ್ಟಿ ಮಲಗಿಸುತ್ತೇನೆ. ಡ್ರೈವರ್‌ಗೆ ನಮ್ಮ ಬಗ್ಗೆ ಅಂತದ್ದೇನೂ ಅನ್ನಿಸಿಲ್ಲ ಎಂದು ನನಗೆ ಸಮಾಧಾನ. ಎದುರು ವಾಹನಗಳ ಬೆಳಕಿನಿಂದ ಮತ್ತೆ ಮತ್ತೆ ನಾವು ಬೆಳಗುತ್ತಿದ್ದೇವೆ. ಹಾರ್ನ್ ಹೊಡೆತಕ್ಕೆ ನಾವು ಮಂಪರಿನಿಂದ ಮೇಲೆದ್ದು ತತ್ತರಿಸುತ್ತೇವೆ. ನಾವು ಬಳ್ಳಾರಿ ಬಿಟ್ಟಿದ್ದೇ ಹನ್ನೊಂದು ದಾಟಿದ ಮೇಲೆ. ಈಗ ನಮಗೆ ನಿದ್ದೆಯೂ ಬರದೆ, ಮಲಗದೇ ಇರಲಾಗದೆ ಚಡಪಡಿಕೆ ಶುರುವಾಗಿದೆ.
ಯಾವಾಗಲೋ ನಾನು ನಿದ್ದೆಗೆ ಜಾರಿದ್ದೆ. ಅವಳು ಛಕ್ಕನೆ ನನ್ನ ಕೈ ಹಿಡಿದು `ಪ್ಲೀಸ್, ನನ್ನ ಕಥೆ ಮುಂದೇನಾಗುತ್ತೆ ಹೇಳು’ ಎಂದಾಗ ನಾನು ಅರೆಕ್ಷಣ ಬೆಚ್ಚಿದೆ.ಅವಳಾಗಲೀ, ನಾನಾಗಲೀ ಹಿಂದೆಂದೂ ಮುಟ್ಟಿಸಿಕೊಳ್ಳದವರು. ಈಗ ಅವಳನ್ನು ಕೈಹಿಡಿದು ಬಸ್ಸಿಗೆ ಹತ್ತಿಸಿದ್ದಷ್ಟೆ; ಇಲ್ಲಿ ಇವಳು ನನಗೆ ಆತುಕೊಂಡು ಮಲಗಿದ್ದಾಳೆ. ಅವಳಿಗೂ, ನನಗೂ ಈ ಸ್ಪರ್ಶ ಹೊಸತು.
`ನೋಡು, ಸುಮ್ನೆ ಸಿದ್ದೆ ಮಾಡು. ಬೆಂಗಳೂರು ಬಂದಮೇಲೆ ಮಾತಾಡೋಣ’ ಎಂದೆ. ಅವಳು ಬಿಡಲಿಲ್ಲ. ನನ್ನ ಕೈ ಹಿಡಿದೆಳೆದಳು. ನನ್ನ ಭುಜ ಹಿಡಿದು ಅಲ್ಲಾಡಿಸಿದಳು. ಮತ್ತೆ ಅವಳ ಕಣ್ಣಿನಲ್ಲಿ ನೀರಿದೆಯೇನೋ, ಕತ್ತಲಿನಲ್ಲಿ ಗೊತ್ತಾಗದೆ ನಾನು ತಡವರಿಸಿದೆ.
ನಾಳೆ ಅವಳೇನಾಗುತ್ತಾಳೆ ಎಂದು ನನಗೆ ಗೊತ್ತಿಲ್ಲ ಎಂದು ಅವಳಿಗೆ ಹೇಳಲೆ? ನಾಳೆ ನಾನೇನಾಗುತ್ತೇನೆ ಎಂದು ನನಗೆ ಗೊತ್ತಿದೆಯೆ?
ನಾನು ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ನಿದ್ದೆ ಮಾಡಿದರೂ ಮಾಡಿದೆ; ಹೆಬ್ಬಾಳದಿಂದ ಮೆಜೆಸ್ಟಿಕ್ಕಿಗೆ ನಡೆದುಕೊಂಡು ಬಂದರೂ ಬಂದೆ. ಬನಶಂಕರಿಯಿಂದ ಟಿಕೆಟ್ ಇಲ್ಲದೇ ಕಮಲಾನಗರಕ್ಕೆ ಹೋದರೂ ಹೋದೆ. ವಿಜಯಲಕ್ಷ್ಮಿ ಥಿಯೇಟರಿನಲ್ಲಿ ೪.೮೦ಕ್ಕೆ ಟಿಕೆಟ್ ಖರೀದಿಸಿ ಒಂದು ಅರೆಸೆಕ್ಸಿ ಇಂಗ್ಲಿಶ್ ಸಿನೆಮಾ ನೋಡಿದರೂ ನೋಡಿದೆ. ನಾನು ಮತ್ತೊಂದು ಕಾಡ್ರಾ ಪ್ಯಾಂಟ್ ಖರೀದಿಸಿದರೂ ಖರೀದಿಸಿದೆ. ನಾನು ಗಾಂಧಿ ಬಜಾರಿನ ಟಿವಿ ಸೇಲ್ಸ್‌ಮನ್ ಕೆಲಸ ಬಿಟ್ಟರೂ ಬಿಟ್ಟೆ…. ನಾನು ಏನಾಗುತ್ತೇನೆ, ಬೆಂಗಳೂರಿಗೆ ಹೋದಮೇಲೆ ಕಾಟನ್‌ಪೇಟೆಗೆ ಹೋಗುತ್ತೇನೋ ಅಥವಾ ಮತ್ತಾವುದೋ ಕಾರ್ಖಾನೆಗೆ ಸೇರಿಕೊಳ್ಳುತ್ತೇನೋ ಅನ್ನೋದೇ ಗೊತ್ತಿಲ್ಲದೆ ಇವಳ ಭವಿಷ್ಯವನ್ನು ಹೇಗೆ ಊಹಿಸಲಿ……
ಅವಳ ಆ ಪುಟ್ಟ ಕಣ್ಣುಗಳನ್ನೇ ಮಿಂಚಿಹೋಗುವ ಬೆಳಕಿನಲ್ಲಿ ನೋಡತೊಡಗಿದೆ. ಅವಳ ವೇಲ್ ಸರಿದು ಮುಖ ಬತ್ತಲಾಗಿತ್ತು. ನಮ್ಮನ್ನು ಆದಷ್ಟೂ ಬೇಗೆ ಬೆಂಗಳೂರಿನಲ್ಲಿ ಎಸೆಯಬೇಕೆಂದು ಡ್ರೈವರ್ ನಿರ್ಧರಿಸಿದ ಹಾಗೆ ಬಸ್ಸು ವೇಗ ಪಡೆದಿತ್ತು. ಜಂಪ್‌ಗಳಿಗೆ ನಾವು ಅತ್ತಿತ್ತ ತೊನೆಯುತ್ತಿದ್ದೆವು. ಅವಳು ಮತ್ತೆ ಮತ್ತೆ ನನಗೆ ಡಿಕ್ಕಿಯಾಗುತ್ತಿದ್ದಳು. ಅವಳ ಮುಖವನ್ನು ಅಷ್ಟು ಹತ್ತಿರದಿಂದ ನಾನು ಮತ್ತೆ ನೋಡಲಾರೆ ಅನ್ನಿಸಿತು.
ಅವ ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದೂ ಆಕೆ ಯಾಕೆ ಇಲ್ಲಿಗೆ ಬಂದಳು, ಯಾಕೆ ಮಾತುಕತೆ ನಡೆಸಿದಳು, ಯಾಕೆ ಮತ್ತೆ ಕುಸಿದುಹೋದಳು ಎಂದು ನನಗೆ ಗೊತ್ತಾಗಲಾರದು. ಈ ರಾತ್ರಿ, ನಾಳೆಯ ಬೆಳಗು ಕಳೆದ ಮೇಲೆ ಅವಳು ಸಿಗಬೇಕೆಂದೇನೂ ಇಲ್ಲವಲ್ಲ….. ಆಕೆಯನ್ನು ಸಂಜೆ ಲಾಡ್ಜಿನಲ್ಲಿ ನೋಡಿದಾಗ ಅವಳು ಇಷ್ಟೆಲ್ಲ ಭಾವಜೀವಿ ಎನ್ನಿಸಿರಲಿಲ್ಲ. ಸುಮ್ಮನೆ ಎಲ್ಲೋ ನೋಡುತ್ತ ಕೂತಿದ್ದಳು. ಎಲ್ಲರೂ ಕಾಫಿ ಕುಡಿಯುತ್ತಿದ್ದರೆ ಈಕೆ ಮಂಡಿಗಳನ್ನು ಕೈಗಳಿಂದ ಸುತ್ತುವರಿದು ವಿರಕ್ತೆಯ ಹಾಗೆ ಕೂತಿದ್ದಳು. ಎಲ್ಲರೂ ಅಲ್ಲಿ ಯಾವುದೋ ಸಿನೆಮಾದ ಯಾವುದೋ ಸನ್ನಿವೇಶದ ಬಗ್ಗೆ ಚರ್ಚಿಸುತ್ತಿದ್ದರೆ ಇವಳು ಮಾತ್ರ ಸೋತುಹೋದ ನಾಯಕಿಯ ಹಾಗೆ ವಿಷಣ್ಣವಾಗಿ ನಗುತ್ತಿದ್ದಳು. ಎಲ್ಲರೂ ಊಟಕ್ಕೆ ಹೋದಾಗಲೇ ನನಗೆ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಗೊತ್ತಾಗಿದ್ದು.
ನಾನು ಅವಳ ಅಂಗೈಯನ್ನು ಮೆಲ್ಲಗೆ ಒತ್ತಿದೆ. ಅವಳ ತೋಳುಗಳನ್ನು ಗಟ್ಟಿಯಾಗಿ ಹಿಡಿದೆ. ಅವಳ ವೇಲ್ ಸರಿಪಡಿಸಿ ಕಿವಿ ಮುಚ್ಚಿದೆ. ಅವಳ ಕೆನ್ನೆ ತಟ್ಟಿದೆ. ಅವಳು ಯಾಕೋ ಪುಟ್ಟ ಮಗುವಿನ ಹಾಗೆ ಮುರುಟಿಕೊಂಡಿದ್ದಾಳೆ. ಬಹುಶಃ ನಾಳೆ ಏನಾದರೂ ಆಗಬಹುದೆ? ನಾನು ಅವಳಿಂದ ಬಿಡುಗಡೆ ಪಡೆಯಲಾರೆನೆ?
`ನೀನು ಜೊತೆಗೆ ಬರ್‍ತೀಯ ಅಂದಮೇಲೆ ಸ್ವಲ್ಪ ಸಮಾಧಾನ ಆಯ್ತು ಕಣೋ’ ಅವಳಿಗೆ ನಿದ್ದೆ ಬಂದಿಲ್ಲ.
ನಾನು ಅವತ್ತು ಬೆಂಗಳೂರಿಗೆ ವಾಪಸಾಗಬೇಕು ಅನ್ನೋ ನಿಯಮವೇನೂ ಇರಲಿಲ್ಲ. ನನಗೆ ಕೆಲಸವೇ ಇರಲಿಲ್ಲ. ಹಾಗಂತ ನಾನು ಅವಳಿಗೆ ಹೇಳಲಾರೆ. ನಾನೀಗ ಮಹಾನ್ ಸಾಮಾಜಿಕ ಕಾರ್ಯಕರ್ತ. ವಿದ್ಯಾರ್ಥಿ ಚಳವಳಿಯಲ್ಲಿ ನಾನೊಬ್ಬ ಮುಖ್ಯ ವ್ಯಕ್ತಿ. ನ್ಯಾಶನಲ್ ಕಾಲೇಜಿನ ಎತ್ತರದ ಗೋಡೆಗಳ ಮೇಲೆ, ರೈಲ್ವೆ ನಿಲ್ದಾಣದ ಉದ್ದುದ್ದ ಕಟ್ಟೆಯ ಮೇಲೆ, ಜೈಲ್,ರೇಸ್‌ಕೋರ್ಸ್ ರಸ್ತೆಗಳಲ್ಲಿ ನಾನು ಬರೆದ ಗೋಡೆಬರಹಗಳನ್ನು ಈಗಲೂ ಮಸುಕಾಗಿ ಕಾಣಬಹುದು. ಚಳವಳಿಗಳಲ್ಲಿ ಪ್ಲಕಾರ್ಡ್ ಬರೆದಿದ್ದೇನೆ. ವರದಕ್ಷಿಣೆ ಸಾವಿನ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನನ್ನ ಕವನವನ್ನು ಯಾರೋ ಮಹರಾಯ್ತಿ ಓದಿದ್ದಾಳೆ.
`ನೀನು ಚಾಮರಾಜಪೇಟೇಲೇ ಇರ್‍ತೀಯ?’
`ಹೌದು.’
`ಹಾಗಾದ್ರೆ ಅವಾಗಾವಾಗ ನೀನು ನನ್ನ ಹಾಸ್ಟೆಲಿಗೆ ಬರಬಹುದು.’
ನಾನು ಅವಳ ತೋಳು ಹಿಡಿದೇ ಹೇಳಿದೆ: `ಬರ್‍ತೀನಿ. ಕನಿಷ್ಟ ವಾರಕ್ಕೊಂದ್ಸಲ ಬಂದೇ ಬರ್‍ತೀನಿ.’
ನಾವು ಹಾಗೇ ಮಲಗಿದ್ದೇವೆ. ಬಸ್ಸು ಭರಭರ ಹೋಗ್ತಾ ಇದೆ. ಲಾರಿಗಳು ನಮ್ಮೆದುರು, ಹಿಂದೆ, ಮುಂದೆ ಬಂದು ಹೋಗುತ್ತಿವೆ. ನಾವು ಬಸ್ಸಿನ ರೊಯ್ಯರೊಯ್ಯ ಸದ್ದನ್ನೇ ಕೇಳುತ್ತ ಮಲಗಿದ್ದೇವೆ. ನಾವು ಚಳಿಗಾಗಲೀ, ಶಬ್ದಕ್ಕಾಗಲೀ, ನಮ್ಮನ್ನು ಆಗಾಗ ದಿಟ್ಟಿಸುವ ಡ್ರೈವರನಿಗಾಗಲೀ ಹೆದರಿಲ್ಲ.
ಅವಳನ್ನು ಸೆಳೆದು ನಾನು ಮಾತನಾಡೋದಕ್ಕೆ ಶುರು ಮಾಡ್ದೆ. ಅವಳ ಜತೆ ಮಾತನಾಡದೇ ಹೀಗೆ ಇರೋದು ಸರಿಯಲ್ಲ ಅನ್ನಿಸತೊಡಗಿತ್ತು.
`ನೋಡು, ನೀನು ಅವನ ಬಗ್ಗೇನೇ ಯೋಚಿಸ್ಬೇಡ ಮಾರಾಯ್ತಿ. ಸುಮ್ನೆ ಬೆಂಗಳೂರಿನಲ್ಲಿ ನಿನ್ನ ಕೆಲಸ ಮಾಡ್ಕೋತಾ ಇರು. ನಾವು ಹೀಗೆ ನೋವು ಅನುಭವಿಸ್ತಾನೇ ಎಷ್ಟು ದಿನಾ ಅಂತ ಇರೋಕ್ಕಾಗುತ್ತೆ… ನಾನು ಪ್ರೀತಿಸ್ತಾ ಇರೋ ಹುಡುಗಿ ಇವತ್ತಿಗೂ ನನಗೆ ಕಾಗದ ಬರೆದಿಲ್ಲ. ಅವಳು ನಿಜಕ್ಕೂ ನನ್ನ ಪ್ರೀತಿಸ್ತಿದಾಳೋ ಇಲ್ವೋ ಅನ್ನೋದೇ ನನಗೆ ಗೊತ್ತಿಲ್ಲ. ನಾನೂ ನಿಂಥರಾನೇ ನೊಂದಿದೇನೆ. ನನಗೆ ಒಂದು ಒಳ್ಳೆ ಕೆಲಸ ಅನ್ನೋದಿಲ್ಲ. ಸೋಶಿಯಲ್ ವರ್ಕ್ ಮಾಡೋದು, ಕೆಲಸ ಮಾಡೋದು ಎಲ್ಲವೂ ಬೇಜಾರಾಗಿದೆ. ಒಂದ್ಸಲ ನನಗೆ ಚಾರ್ಮಾಡಿ ಘಾಟಿನಲ್ಲಿ ಒಂಟಿಯಾಗಿ ಅಡ್ಡಾಡುತ್ತ, ಬಸ್ಸುಗಳಿಗೆ ಅಡ್ಡಹಾಕಿ ಭಿಕ್ಷೆ ಕೇಳುತ್ತ ಬದುಕಿರೋಣ ಅನ್ನಿಸಿದೆ. ಹೇಗೂ ಅಲ್ಲಿ ನೀರಿದೆ. ದೇವಸ್ಥಾನ ಇದೆ. ಧರ್ಮಸ್ಥಳ,ಕೊಲ್ಲೂರು, ಶೃಂಗೇರಿ ಹೀಗೆ ಹೋಗ್ತಾ ಇರಬಹುದು.
`ಈಗ ನಿದ್ದೆ ಮಾಡು. ನಾನಿಲ್ವ? ಹೀಗೆ ನಾವಿಬ್ರೂ ಎಷ್ಟು ಸಲ ಪ್ರಯಾಣ ಮಾಡೋದಕ್ಕಾಗುತ್ತೆ? ನಿನ್ನನ್ನ ನಾನು ಎಷ್ಟು ಸಲ ನೋಡಿದ್ರೂ ನನ್ನ ಪುಟ್ಟ ಗೆಳತಿ ಅಂತಲೇ ಅನ್ಸುತ್ತೆ. ನಾನು ತುಂಬಾ ಭಾವನಾಜೀವಿ. ನನ್ನ ಕವನಗಳಲ್ಲಿ ಇರೋದೆಲ್ಲ ಬರೀ ಕನಸುಗಳು; ಅದರಲ್ಲಿ ನಾನೇ ತೇಲಿಹೋಗ್ತಾ ಇರ್‍ತೇನೆ. ಎಷ್ಟೋ ಸಲ ಅನಾಥ ಅಂತ ನನ್ನನ್ನೇ ನಾನು ಕರ್‍ಕೊಂಡಿದೇನೆ. ಬೆಂಗಳೂರಿಗೆ ಹೋದಮೇಲೆ ನನ್ನ ಕವನಗಳನ್ನು ಜೆರಾಕ್ಸ್ ಮಾಡಿಕೊಡ್ತೇನೆ, ಓದು. ನನ್ನ ಕತೆಯೆಲ್ಲ ಅದರಲ್ಲಿವೆ.
`ನೀನು ಇವತ್ತು ಬೆಳಗ್ಗೆ ಎಷ್ಟು ಚಲೋ ನಗ್ತಾ ಇದ್ದೆ… ಸಂಜೆ ನೋಡಿದ್ರೆ ಹಾಗೆ ಉಡುಗಿದೀಯ. ಯಾಕೆ ಮಾರಾಯ್ತಿ…. ಅವ ಬಿಟ್ರೆ ನಿನಗೆ ಬೇರೆ ಯಾರೂ ಸಿಗಲ್ವ? ಸುಮ್ನೆ ಯೋಚನೆ ಮಾಡ್ಬೇಡ. ಮಲಕ್ಕೋ. ನಾಳೆ ಮಾತಾಡಣ.’
ಹೀಗೇ ಏನೇನೋ ಮಾತನಾಡುತ್ತ ಅವಳನ್ನು ಹಾಗೇ ನೋಡುತ್ತಿದ್ದೆ. ಅವಳ ಕಣ್ಣಲ್ಲಿ ಎಂಥದೋ ನಿರಾಸಕ್ತಿ. ಅವಳಿಗೆ ನನ್ನ ಪ್ರೀತಿ-ಪ್ರೇಮದ ಕಥೆ ತಗೊಂಡು ಆಗಬೇಕಾದ್ದೇನೂ ಇಲ್ಲವಲ್ಲ…. ಹಾಗೇ ಅವಳ ನೆತ್ತಿ ತಟ್ಟುತ್ತ ಬಸ್ಸಿನ ಛಾವಣಿಯನ್ನೇ ನೋಡುತ್ತ ಮಲಗಿದೆ.
ಯಾವಾಗಲೋ ತುಮಕೂರು ದಾಟಿ ಬೆಂಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ನಾವು ನಡುಗತೊಡಗಿದೆವು. ಯಶವಂತಪುರ,ನವರಂಗ್ ದಾಟಿ ಮೆಜೆಸ್ಟಿಕ್ಕಿಗೆ ಬರೊ ಹೊತ್ತಿಗೆ ನಾವು ನಮ್ಮ ಲಗೇಜನ್ನು ಎತ್ತಿಕೊಂಡಿದ್ದೆವು.
ಸೀದಾ ಆಟೋ ಹಿಡಿದು ಚಾಮರಾಜಪೇಟೆಗೆ ಹೋದೆವು. ಅವಳನ್ನು ಹಾಸ್ಟೆಲಿಗೆ ಬಿಟ್ಟು ನಾನು ನನ್ನ ಕಾಯಕಕ್ಕೆ ಮರಳಿದೆ.
ಒಂದು ವಾರ ಕಳೆದಿತ್ತು. ಅವಳಿಂದ ಯಾವುದೇ ಫೋನ್ ಕೂಡಾ ಇಲ್ಲ. ನಾನೇನೂ ಹೆಚ್ಚು ಚಿಂತಿಸಲಿಲ್ಲ. ಬಸ್ಸಿನಲ್ಲಿ ಅವಳ ಜೊತೆ ಮಲಗಿದಾಗ ನನ್ನೊಳಗೆ ಎದ್ದ ಭಾವತುಮುಲಗಳು ಕಾಂಕ್ರೀಟಿನ ಗೋಡೆಗಳಲ್ಲಿ ಅಡಗಿಹೊಗಿದ್ದವು. ನಾನು ಅಲ್ಲಿ ಬಸ್‌ನಂಬರುಗಳ ನಡುವೆ, ಕ್ರಾಸುಗಳ ನಡುವೆ, ಮನೆ ಸಂಖ್ಯೆಗಳ ನಡುವೆ ಹೂತುಹೋಗಿದ್ದೆ. ನಾನು ಮತ್ತೆ ಕೆಲಸ ಬಿಟ್ಟೆ. ಈಗ ಶ್ರೀರಾಮಪುರದ ಐದನೇ ಕ್ರಾಸಿನ ವಾರಪತ್ರಿಕೆಯಲ್ಲಿ ರಸೀದಿ ಹರಿಯೋ ಕೆಲಸ.
ನನ್ನ ಆಫೀಸಿಗೆ ಫೋನ್ ಬಂದಾಗಲೇ ಅವಳ ನೆನಪಾಗಿದ್ದು. `ಬನ್ನಿ ಸರ್, ಅವಳು ಯಾಕೋ ತುಂಬಾ ಡಲ್ ಆಗಿದಾಳೆ. ತುಂಬಾ ಅಳ್ತಿದಾಳೆ. ಕೊನೆಗೆ ನಿಮ್ಮ ಫೋನ್ ನಂಬರ್ ಕೊಟ್ಳು. ಕೂಡ್ಲೇ ಬರ್‍ತೀರ ಸರ್?’ ಯಾರೋ ಅವಳ ಗೆಳತಿ ಕೇಳಿದಾಗ ನನಗೆ ಶಾಕ್ ಆಯ್ತು.
ಅಲ್ಲಿ ಹಾಸ್ಟೆಲಿನ ಜಗಲಿ ಕಟ್ಟೆಯ ಮೇಲೆ ಅವಳು ಕುಳಿತಿದ್ದಾಳೆ. ಯಾರನ್ನು ನೋಡುತ್ತಿದ್ದಾಳೆ ಎಂದು ಹೇಳಲು ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನನ್ನು ನೋಡುತ್ತಾಳೆ. ಅವಳ ಗೆಳತಿಯರು ಒಂದು ಬದಿಯಲ್ಲಿ ಗುಸು ಗುಸು ಮಾತನಾಡಿಕೊಳ್ಳುತ್ತ ಕೂತಿದ್ದಾರೆ. ನಾನು ಅವಳ ಫ್ರೆಂಡ್ ಅಂತ್ಲೋ ಏನೋ, ಹತ್ತಿರ ಬಂದಿಲ್ಲ. ಸಂಜೆಯಾಗ್ತಾ ಇದೆ.
ನಾನು ಅವಳ ಅಂಗೈಯನ್ನು ಹಿಡಿದು ಸಮಾಧಾನ ಮಾಡೋದಕ್ಕೆ ಹೊರಟರೆ,ಮತ್ತೆ ಅವಳ ಕಣ್ಣಿನಿಂದ ನೀರು ಧುಮುಕುತ್ತಿದೆ. ಅವಳೇನೂ ನನ್ನ ಲವ್ ಮಾಡ್ತಿಲ್ಲ. ನಾನೂ ನನ್ನದೇ ಭಗ್ನಬದುಕಿನಲ್ಲಿ ಬಿದ್ದಿದ್ದೇನೆ. ಆದರೂ ಯಾಕೆ ಅವಳಿಗೆ ನಾನು ಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ.
`ಅವನು ಬೇರೆ ಮದುವೆಯಾಗಬಹುದಾ?’
ಅವನು ಬೇರೆ ಮದುವೆಯಾದರೆ ನೀನೂ ಬೇರೆ ಮದುವೆಯಾಗು ಎಂದು ಅವಳಿಗೆ ತಿಳಿಹೇಳುವಷ್ಟರಲ್ಲಿ ಎಂಟೂವರೆ ದಾಟಿತ್ತು.
ಮತ್ತೆ ಅವಳ ಫೋನ್ ಬರಲಿಲ್ಲ.
ಈಗ ನಾನು ಕನಿಂಗ್‌ಹ್ಯಾಮ್ ರಸ್ತೆಯಲ್ಲಿದ್ದೇನೆ. ಸ್ಕೂಟರ್ ಬಂದಿದೆ. ಹೆಂಡತಿ ಇದ್ದಾಳೆ. ಮಗ ಬೆಳೆದಿದ್ದಾನೆ. ಬೀದಿಗಳು ಧುತ್ತನೆ ಬೆಳೆದಿವೆ. ನಾನು ಈಟಿ ಯುಗದ ಹೊಸ ಕೆಲಸ ಸೇರಿದ್ದೇನೆ. ಅವಳಿಗೆ ಆಗಾಗ ಸಿಗುತ್ತಿದ್ದೆ. ಈಗಲೂ ಅವಳಿಗೆ ನನ್ನ ಮೊಬೈಲ್ ಸಂಖ್ಯೆ ಗೊತ್ತು.
ಅವಳ ಫೋನ್ ಬಂದಾಗ ನಾನು ಕೆಳಗೆ ಪಿಜ್ಜಾ ಮುಕ್ಕುತ್ತಿದ್ದೆ. `ಅವನ ಮನೆಗೆ ಹೋಗಬೇಕು ಅಂತ ಅನ್ನಿಸಿದೆ ಮಾರಾಯ’ ಎಂದಳು. ಮೊದಲು ಆಟೋದಲ್ಲೇ ಇಲ್ಲಿಗೆ ಬಾ, ಆಮೇಲೆ ಮಾತಾಡೋಣ ಎಂದೆ. ಅವನೂ ಬೆಂಗಳೂರಿನಲ್ಲೇ ಇದ್ದಾನೆ. ದೊಡ್ಡ ಆರ್ಕಿಟೆಕ್ಟ್.
ಅವಳ ಮುಖದಲ್ಲಿ ಏನೋ ದುಗುಡ. ಬಳ್ಳಾರಿಯಿಂದ ಬಸ್ಸಿನಲ್ಲಿ ಬಂದಾಗ ಇದ್ದ ಖಿನ್ನತೆಗೂ, ಇವತ್ತಿನದಕ್ಕೂ ತುಂಬಾ ವ್ಯತ್ಯಾಸವಿದೆ.
ಇಬ್ಬರೂ ಆಟೋದಲ್ಲೇ ಅವನ ಮನೆಗೆ ಹೋದೆವು. ಸುಮ್ಮನೆ ಯಾವುದೋ ಸಿನೆಮಾ ಹಾಕಿಕೊಂಡು ನೋಡ್ತಾ ಇದ್ದವನು ನಮ್ಮನ್ನು ನೋಡಿ ಹುಬ್ಬೇರಿಸಿದ. `ಅರೆ ಎಂಥ ಸರ್‌ಪ್ರೈಸ್’ ಎಂದ. ಕೂತುಕೊಳ್ಳಲು ಹೇಳಿ ಹಾಲು ತರಲು ಹೊರಗೆ ಹೋದ. ನಾವು ನಗು ಹಂಚಿಕೊಂಡೆವು. ಅವನಿನ್ನೂ ಮದುವೆಯಾಗಿಲ್ಲ. ಅವನಿಗೆ ವಯಸ್ಸಿನ ಪರಿವೆ ಇಲ್ಲ.
ಅವನೇ ಮಾಡಿದ ಚಾ ಕುಡಿದೆವು. ಮಾಡರ್ನ್ ಆರ್ಕಿಟೆಕ್ಚರ್ ಮಾರುಕಟ್ಟೆಯ ಬಗ್ಗೆ ಅವನು ಹೇಳಿದ ಡೈಲಾಗ್‌ಗಳಿಗೆ ಇವಳೂ ಒಂದಷ್ಟು ಪ್ರತಿಕ್ರಿಯೆ ನೀಡಿದಳು. ಹಾಗೇ ಅರ್ಧ ತಾಸು ಮಾತನಾಡಿ ಹೊರಬಿದ್ದೆವು.
ಆಟೋದಲ್ಲಿ ಕುಳಿತಾಗ ಅವಳ ಮುಖದಲ್ಲಿ ನಗು ಮಾಸಿರಲಿಲ್ಲ. ಯಾಕೆ ಅವಳು ನಗುತ್ತಿದ್ದಾಳೆ? ಅವನನ್ನು ಸೋಲಿಸಿದೆ ಎಂದೆ? ತಾನು ಮದುವೆಯಾಗಿ ಸುಖವಾಗಿದ್ದೇನೆ; ನೀನು ಮಾತ್ರ ಒಂಟಿಯಾಗಿದ್ದೀಯ ಅಂತಲೆ?
ನನ್ನ ಆಫೀಸಿನ ಎದುರು ಇಳಿದೆ. ಮತ್ತೆ ಅವಳ ಕೈ ಹಿಡಿದು ಹೇಳಿದೆ: ಚೆನ್ನಾಗಿರು ಮಾರಾಯ್ತಿ. ಅವನ ಭೇಟಿ ಆದ್ರೂ ಒಂದೆ; ಆಗದಿದ್ದರೂ ಒಂದೆ. ಈಗಂತೂ ಅವನನ್ನು ನೋಡಿದೀಯ. ಮುಂದೆ ಹಾಗೆ ಕೇಳಬೇಡ.
`ಆಯ್ತು ಕಣೋ. ತುಂಬಾ ಥ್ಯಾಂಕ್ಸ್. ನಾನೊಬ್ಳೇ ಖಂಡಿತ ಅವನ ಮನೆಗೆ ಹೋಗ್ತಿರಲಿಲ್ಲ. ಆದ್ರೆ ಎಷ್ಟೋ ವರ್ಷದಿಂದ ಕೊರೀತಾ ಇತ್ತು. ಅವನನ್ನು ಮಾತಾಡಿಸಬೇಕು ಅಂತ. ಇವತ್ತು ಸಮಾಧಾನ ಆಯ್ತು. ಅವನೇನೂ ನನಗೆ ಸೂಟ್ ಆಗ್ತಾ ಇರಲಿಲ್ಲ ಅಂತ ಕಾಣ್ಸುತ್ತೆ. ಅದಕ್ಕೇ ನಗು ಬಂತು.’
ಇವಳಿಗೆ ತನ್ನದೇ ಆದ ಆರ್ಗೂಮೆಂಟ್ ಬೇಕಿತ್ತು ಅನ್ನಿಸಿತು.
ಪಾರ್ಕಿಂಗ್ ಇಲ್ಲದ ಈ ಬೀದಿಯಲ್ಲಿ ಆಟೋ ನಿಲ್ಲಿಸುವುದೇ ಕಷ್ಟ. ಅವಳನ್ನು ಹಾಗೆ ಬೀದಿಯಲ್ಲಿ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. `ಸರಿ ಬೈ. ಮತ್ತೆ ಯಾವಾಗ್ಲಾದರೂ ಸಿಗು’ ಎಂದೆ.
`ನೀನು ನನ್ನ ಬೆಸ್ಟ್ ಫ್ರೆಂಡ್ ಮಾರಾಯ. ನನಗೆ ಡಿಪ್ರೆಸ್ ಆದಾಗ್ಲೆಲ್ಲ ನಿನಗೆ ಫೋನ್ ಮಾಡ್ತೀನಿ. ಪ್ಲೀಸ್ ಮಾತಾಡು’ ಎಂದಳು. ಇವರ ಮಾತು ನಿಲ್ಲೋದೇ ಇಲ್ಲ ಎಂದು ಗೊತ್ತಾಗಿಬಿಟ್ಟಂತೆ ಆಟೋ ಹೊರಟೇ ಬಿಟ್ಟಿತು.
ಇಲ್ಲಿಗೆ ಈ ಕಥೆ ಮುಗಿಯಿತು ಎಂದು ನಾನೂ ನೀವೂ ಅಂದುಕೊಂಡಿರುವ ಹಾಗೆಯೇ ಹತ್ತು ವರ್ಷಗಳು ಕಳೆದವು.
ಬಳ್ಳಾರಿಯ ಬಸ್ಸು, ಧೂಳು, ಚಳ್ಳಕೆರೆಯ ದಾಭಾ, ತುಮಕೂರಿನ ಟ್ರಾಫಿಕ್ ಜಾಮ್ ಎಲ್ಲವನ್ನೂ ನಾನು ಮರೆತಿದ್ದೆ. ಹಿರಿಯೂರುವರೆಗಿನ ರಸ್ತೆ ಹಾಗೇ ಇದ್ದರೂ ರಾಷ್ಟ್ರೀಯ ಹೆದ್ದಾರಿಯೀಗ ನಾಲ್ಕು ಪಥಗಳಾಗಿ ಬಿಡಿಸಿಕೊಂಡಿದೆ. ನಾನೂ ನಾಲ್ಕಾರು ಕೆಲಸಗಳನ್ನು ಮಾಡಿ, ನನ್ನ ಅನುಭವ ವಿಸ್ತಾರದ ನೆಪದಲ್ಲಿ ಬೆಂಗಳೂರಿನ ಹತ್ತಾರು ಕಂಪನಿಗಳಲ್ಲಿ ದುಡಿದೆ ; ಸೋಡೆಕ್ಸೋ ಪಾಸ್ ಹೊಡೆದು ಮಜಾ ಮಾಡಿದೆ. ಬಸ್ಸಿನ ಸುಖವನ್ನೇ ಮರೆತ ದರಿದ್ರ ಮನುಷ್ಯನಾದೆ; ಸ್ಕೂಟರಿನಿಂದ ಕಾರಿಗೆ ಜಿಗಿದೆ. ಇಂಟರ್‌ನೆಟ್, ಚಾಟ್ ಎಲ್ಲದಕ್ಕೂ ಪಕ್ಕಾದೆ. ಅವಳು ಎಲ್ಲಿದ್ದಾಳೆ, ಹೇಗಿದ್ದಾಳೆ ಅನ್ನೋದಿರಲಿ, ನನ್ನ ಪ್ರೀತಿಯ ಗೆಳೆಯರನ್ನೂ ಮರೆತು ಹಾಯಾಗಿ ಇರೋದಕ್ಕೆ ಆರಂಭಿಸಿದೆ.
`ಹಾಯ್, ಹ್ಯಾಗಿದೀಯ?’ ಎಂಬ ಒಂದು ಸಾಲಿನ ಪ್ರೈವೇಟ್ ಮೆಸೇಜ್ ನನ್ನ ಖಾಸಗಿ ಜಾಲತಾಣಕ್ಕೆ ಬಂದಾಗಲೇ ಅವಳೂ ಇಲ್ಲೆಲ್ಲೋ ಇದ್ದಾಳೆ ಎಂದು ಅಚ್ಚರಿಯಾಯ್ತು. ಪೋನ್ ಮಾಡಿದರೆ ಅಚ್ಚ ಬೆಂಗಳೂರು ಇಂಗ್ಲಿಶಿನಲ್ಲಿ ಹಾಯ್, ಹೂ ಈಸ್ ದಿಸ್ ಎಂದಳು. ನಾನೇ ಮಾರಾಯ್ತಿ ಎಂದು ನಸುನಕ್ಕಮೇಲೆ ಅವಳ ಭಾಷೆ ಬದಲಾಯ್ತು. ಅವನೆಲ್ಲಿದಾನೆ ಗೊತ್ತ ಅನ್ನೋದೇ ಮೊದಲ ಪ್ರಶ್ನೆ.
ಅವನೀಗ ಮದುವೆಯಾಗಿದಾನೆ ಎಂದೆ. ಅವನಿಗೆ ಒಬ್ಬ ಮಗಳಿದಾಳೆ. ಚಲೋ ಚೂಟಿ ಎಂದೆ. ಹೌದ ಎಂದು ಅಚ್ಚರಿಪಟ್ಟಳು. ಅವಳ ಹೆಸರು ಕೇಳಿದಳು.
`ಮೌನ’
`ಅದೇ ಹೆಸರು….. ಅದು ನಂದೇ ಪ್ರಪೋಸಲ್ ಕಣೋ…’ ಎಂದವಳೇ ಫೋನ್ ಕಟ್ ಮಾಡಿದಳು.
ಕಿಟಕಿಯ ಕರ್ಟನ್ ಸರಿಸಿ ನೋಡಿದೆ. ರಸ್ತೆಯಲ್ಲಿ ಭರ್ರೋ ಎಂದು ರಿಕ್ಷಾಗಳು, ಕಾರುಗಳು,ಸ್ಕೂಟರುಗಳು ಸಾಗುತ್ತಲೇ ಇದ್ದವು.
(ಕೃಪೆ: ಉಷಾಕಿರಣ)

«
Next
Newer Post
»
Previous
Older Post

No comments: