'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿನಯದ '' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಜಾದೂ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರದ ಕಲೆಕ್ಷನ್ ಮಾಡುತ್ತ, ಹೊಸ ಹೊಸ ದಾಖಲೆ ಬರೆಯುತ್ತಿದೆ. ಕೊರೊನಾ ಲಾಕ್‌ಡೌನ್ ನಂತರ ಮೊದಲಿನಂತೆಯೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂತೆ ಮಾಡುವಲ್ಲಿ 'ರಾಬರ್ಟ್' ಯಶಸ್ಸು ಕಂಡಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ಹೇಳುವುದಕ್ಕೆ 'ಡಿ ಬಾಸ್' ಮತ್ತು 'ರಾಬರ್ಟ್' ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಇದೀಗ ಅದು ಕ್ಯಾನ್ಸಲ್ ಆಗಿದೆ. ದಿಢೀರನೇ ಕ್ಯಾನ್ಸಲ್ ಆಗುವುದಕ್ಕೆ ಕಾರಣ, ಕೊರೊನಾ ಎರಡನೇ ಅಲೆ! ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ!ಈ ಕುರಿತು ಡಿ ಬಾಸ್, ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳನ್ನು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ. ನಿಮ್ಮ ಆರೋಗ್ಯವೇ ನಮ್ಮ ಹಾಗೂ ಸರ್ಕಾರದ ಮೊದಲ ಆದ್ಯತೆ. ದಯಮಾಡಿ ಮಾಸ್ಕ್ ಧರಿಸಿ ನಿಮ್ಮ ಜಾಗ್ರತೆಯಲ್ಲಿರಿ. ಈಗಿನ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ಖಂಡಿತ ನಿಮ್ಮ ಊರಿಗೆ ಆಗಮಿಸುತ್ತೇವೆ. ನಿಮ್ಮ ಪ್ರೀತಿ-ವಿಶ್ವಾಸ ಸದಾ ಹೀಗೆ ಇರಲಿ. ಇಂತಿ ನಿಮ್ಮ ಪ್ರೀತಿಯ ದಾಸ' ಎಂದು ಬರೆದುಕೊಂಡಿದ್ದಾರೆ. ಎಲ್ಲೆಲ್ಲಿ ನಡೆಯಬೇಕಿತ್ತು ? ಈ ಮೊದಲು ಮಾಡಿಕೊಂಡಿದ್ದ ಪ್ಲ್ಯಾನ್ ಪ್ರಕಾರ, ನಾಲ್ಕು ದಿನಗಳ ಕಾಲ ವಿಜಯ ಯಾತ್ರೆ ನಡೆಯಬೇಕಿತ್ತು. ಮಾರ್ಚ್ 29ರ ಸೋಮವಾರದಿಂದ 'ರಾಬರ್ಟ್' ವಿಜಯ ಯಾತ್ರೆ ತುಮಕೂರಿನಿಂದ ಆರಂಭಗೊಂಡು, ನಂತರ ಚಿತ್ರದುರ್ಗ, ದಾವಣಗೆರೆಗೆ ತೆರಳಬೇಕಿತ್ತು ದರ್ಶನ್ ಮತ್ತು ತಂಡ! ಆನಂತರ ಮಾರ್ಚ್ 30ರ ಮಂಗಳವಾರ ಧಾರವಾಡ, ಹುಬ್ಬಳ್ಳಿ ಮತ್ತು ಹಾವೇರಿಗೆ ಚಿತ್ರತಂಡ ಭೇಟಿ ನೀಡಿ, ಮಾರ್ಚ್ 31ರಂದು ಶಿವಮೊಗ್ಗ, ಹಾಸನ ಹಾಗೂ ತಿಪಟೂರಿಗೆ ಹೋಗುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊನೆಯ ದಿನ, ಅಂದರೆ, ಏಪ್ರಿಲ್ 1ರಂದು ಗುಂಡ್ಲುಪೇಟೆ, ಮೈಸೂರು, ಮದ್ದೂರು, ಮಂಡ್ಯಕ್ಕೆ ಭೇಟಿ ನೀಡಿ, ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಯೋಜನೆ ಸಿದ್ಧಗೊಂಡಿತ್ತು. ಇದೀಗ ಎಲ್ಲವೂ ಕೊರೊನಾದಿಂದಾಗಿ ಸ್ಥಗಿತಗೊಂಡಿದೆ. ಶುರುವಾಗಿದೆ ಕೊರೊನಾ ಎರಡನೇ ಅಲೆ!ಕೊರೊನಾದಿಂದ ಹೊಡೆತ ಉದ್ಯಮಗಳಲ್ಲಿ ಚಿತ್ರರಂಗವೂ ಒಂದು. ಎಲ್ಲ ಉದ್ಯಮಗಳು ಅಲ್ಪ ಕಾಲದಲ್ಲೇ ಚೇತರಿಕೆ ಕಂಡರೆ, ಚಿತ್ರರಂಗ ಚೇತರಿಸಿಕೊಳ್ಳಲು ತುಂಬ ಸಮಯ ಬೇಕಾಯ್ತು. ಈಗತಾನೇ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕಿದದ್ದರ ಜೊತೆಗೆ ದೊಡ್ಡ ದೊಡ್ಡ ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಪುನಃ ಚಿತ್ರೋದ್ಯಮ ಚೇತರಿಸಿಕೊಂಡಿತು ಎನ್ನುವಷ್ಟರಲ್ಲೇ ಕೊರೊನಾ ಎರಡನೇ ಅಲೆ ಶುರುವಾಗಿ, ಆತಂಕ ಉಂಟು ಮಾಡಿದೆ!
from Sandalwood News: Kannada Cinema, Film, Movie Reviews News | Vijaya Karnataka https://ift.tt/3dabUD7
via IFTTT
No comments:
Post a Comment